ಕಾಮಾಕ್ಷಿ

ಕಾಮಾಕ್ಷಿ ಶೈವರಿಗೆ ತುಂಬ ಮೆಚ್ಚಿನ ದೇವತೆ. ದೇವತೆಗಳನ್ನು ಅಸುರರ ಹಿಂಸೆಯಿಂದ ಉಳಿಸಲು ಬಿಲಾಕಾಶವೆಂಬ ದ್ವಾರದಿಂದ ಕಾಮಾಕ್ಷಿ ಮೈದೋರಿದುದಾಗಿ ಹೇಳಲಾಗಿದೆ. ಭಾರತದ ಪ್ರಮುಖ ಶೈವಶಕ್ತಿಪೀಠಗಳಾದ ಮಧುರೆ, ಕಂಚಿ, ಮತ್ತು ಕಾಶಿ ಈ ಸ್ಥಳಗಳಲ್ಲಿ ಮೀನಾಕ್ಷಿ, ಕಾಮಾಕ್ಷಿ ಮತ್ತು ವಿಶಾಲಕ್ಷಿ ಎಂಬ ಹೆಸರುಗಳಿಂದ ಪೂಜೆಗೊಳ್ಳುವ ಆದಿಶಕ್ತಿರೂಪಿಣಿಯಾದ ಕಾಮಾಕ್ಷಿಯನ್ನು ದೂರ್ವಾಸ, ಪರಶುರಾಮ, ಧೌಮ್ಯ ಮುಂತಾದ ಋಷಿಗಳು ಪೂಜಿಸಿದರೆಂದು ಪ್ರತೀತಿಯಿದ್ದರೂ ಕಂಚಿಯ ಕಾಮಾಕ್ಷಿವಿಗ್ರಹವನ್ನೂ ಅದರ ಮುಂದಿರುವ ಶ್ರೀಚಕ್ರವನ್ನೂ ಶಂಕರಚಾರ್ಯರು ಪ್ರತಿಷ್ಠಾಪಿಸಿದಂತೆ ತಿಳಿದುಬರುತ್ತದೆ. ಕಂಚಿಯ ಈ ಪ್ರಸಿದ್ಧ ದೇವಾಲಯದ ಮುಖ್ಯ ಪೂಜೆಗಳೆಲ್ಲವೂ ಈ ಶ್ರೀಚಕ್ರಕ್ಕೆ ನಡೆಯುತ್ತವೆ. ದೇವಿಯ ಸನ್ನಿಧಿಗೆ ಕಾಮಕೋಟಿಪೀಠವೆಂದು ಹೆಸರು. 

 

    (ಜೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ